About Chanda Pustaka

ಕನ್ನಡ ಭಾಷೆಯು ಭಾರತೀಯ ರಾಷ್ಟ್ರೀಯ ಭಾಷೆಯಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿರುವ ಕರ್ನಾಟಕದಲ್ಲಿ ಸುಮಾರು ೭೦ ಮಿಲಿಯನ್ ಜನರಿಗೆ ಇದು ಮಾತೃಭಾಷೆಯಾಗಿದೆ. ಈ ಭಾಷೆಗೆ ಸುಮಾರು ೨೦೦೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಛಂದ ಪುಸ್ತಕ ಪ್ರಕಾಶನ ಸಂಸ್ಥೆಯು ಈ ಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತದೆ. ಜಗತ್ತಿನಾದ್ಯಾಂತ ಇಂಗ್ಲೀಷ್ ಭಾಷೆಯು ಸಾರ್ವಭೌಮತ್ವವನ್ನು ಹೊಂದಿರುವ ಈ ಹೊತ್ತಿನಲ್ಲಿ ದೇಶೀಯ ಭಾಷೆಗಳನ್ನು ಕಾಪಾಡಿಕೊಳ್ಳುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಅಂತಹ ನಿಟ್ಟಿನಲ್ಲಿ ಛಂದ ಪುಸ್ತಕ ಪ್ರಕಾಶನವು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ.

ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದಲೇ ಛಂದ ಪುಸ್ತಕ ಕಾರ್ಯನಿರ್ವಹಿಸುತ್ತದೆ. ನಿರಂತರವಾಗಿ ಸಾಹಿತ್ಯದ ಹೊಸಧ್ವನಿಗಳ ಹುಡುಕಾಟ ಇದರ ಮುಖ್ಯ ಕಾರ್ಯವಾಗಿದೆ. ೨೦೦೪ರಲ್ಲಿ ಸ್ಥಾಪನೆಯಾದ ಈ ಪ್ರಕಾಶನ ಸಂಸ್ಥೆ ಈವರೆಗೆ ದೊಡ್ಡ ಸಂಖ್ಯೆಯಲ್ಲಿ ಪುಸ್ತಕಗಳನ್ನೇನೂ ಪ್ರಕಟಿಸಿಲ್ಲ. ಆದರೆ ಈವರೆಗೆ ಪ್ರಕಟಿಸಿದ ನೂರರಷ್ಟು ಪುಸ್ತಕಗಳು ಜನಬೇಡಿಕೆಯನ್ನು ಪಡೆದಿವೆ; ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು, ಬಹುಮಾನಗಳನ್ನು ಗಳಿಸಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ “ಯುವ ಪುರಸ್ಕಾರ” ಪ್ರಶಸ್ತಿಯು ಈ ಸಂಸ್ಥೆಗೆ ಮೂರು ಬಾರಿ ಬಂದಿದೆ ಎನ್ನುವುದು ಅದರ ಆಶಯವನ್ನು ಸ್ಪಷ್ಟ ಪಡಿಸುತ್ತದೆ. ಕಳೆದ ಹದಿನಾರು ವರ್ಷಗಳಿಂದ ನಿಷ್ಠೆಯಿಂದ ಈ ಜವಬ್ದಾರಿಯನ್ನು ನಿರ್ವಹಿಸಿರುವುದರ ಕಾರಣದಿಂದ, ಹೊಸ ಬರಹಗಾರರು ಈ ಪ್ರಕಾಶನದ ಮೂಲಕ ತಮ್ಮ ಮೊದಲ ಕೃತಿಯನ್ನು ಹೊರ ತರುವ ಕನಸು ಕಾಣುತ್ತಾರೆ. ಪ್ರಸಿದ್ಧರ ಪುಸ್ತಕಗಳನ್ನು ಪ್ರಕಟಿಸಿ ಹಣ ಗಳಿಸುವ ವಾಣಿಜ್ಯ ಉದ್ದೇಶದಿಂದ ಛಂದ ಪುಸ್ತಕ ಯಾವತ್ತೂ ದೂರ ನಿಂತಿದೆ.

ಅನುವಾದ ಕಾರ್ಯವನ್ನೂ ನಿರಂತರವಾಗಿ ಈ ಸಂಸ್ಥೆ ಮಾಡುತ್ತಲೇ ಬಂದಿದೆ. ಜಗತ್ತಿನ ವಿಭಿನ್ನ ಸಂಸ್ಕೃತಿಗಳನ್ನು, ಜಗತ್ತು ಎದುರಿಸಿದ ಸವಾಲುಗಳನ್ನೂ ಅರ್ಥ ಮಾಡಿಕೊಳ್ಳಬಹುದಾದ ಆತ್ಮಚರಿತ್ರೆ, ಇತಿಹಾಸದ ಕೃತಿಗಳು, ಸೃಜನಶೀಲ ಬರವಣಿಗೆಗಳನ್ನು ಬಹುಗಂಭೀರವಾಗಿ ಪರಿಗಣಿಸಿದೆ. ಇಲ್ಲಿಯೂ ಈ ಸಂಸ್ಥೆ ಹೊಸ ಅನುವಾದಕರನ್ನು ಹುಡುಕಿ, ಅವರ ಉತ್ಸಾಹವನ್ನು ಪ್ರೋತ್ಸಾಹಿಸಿ ಬೆಳೆಸುತ್ತಾ, ಅವರಿಂದಲೇ ಈ ಕೆಲಸವನ್ನು ಉತ್ತಮ ಗುಣಮಟ್ಟದಲ್ಲಿ ಮಾಡಿಸುತ್ತಾ ಬಂದಿದೆ. ಆ ಕಾರಣದಿಂದ ಜಗತ್ತಿನ ಉತ್ತಮ ಕೃತಿಗಳು ಕನ್ನಡದ ಓದುಗರಿಗೆ ಲಭ್ಯವಾಗಿವೆ.

ಕನ್ನಡದ ಪ್ರಸಿದ್ಧ ಲೇಖಕರಾದ ವಸುಧೇಂದ್ರ ಅವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ರಚಿಸಿದ ಪುಸ್ತಕಗಳಿಂದ ಬರುವ ಲಾಭವನ್ನು ಈ ಸಂಸ್ಥೆಯನ್ನು ನಡೆಸಲು ಬಳಸುತ್ತಾರೆ.

Scroll to top