Rushyasringa

80.00

ಡಿಯರ್ ಋಷ್ಯಶೃಂಗ…

ಕೆಲವು ಕಲ್ಪಗಳ ಹಿಂದೆ ನಿನ್ನ ಬಗ್ಗೆ ಓದಿದ ನೆನಪು. ನಿನ್ನ ತಲೆಯಲ್ಲಿ ಕೊಂಬಿತ್ತೆಂದು ಒಂದು ಕತೆ. ಜಿಂಕೆಗೆ ಹುಟ್ಟಿದ್ದಕ್ಕೆ ಹೀಗೆಂದು ವ್ಯಾಖ್ಯೆ. ಬರಕ್ಕೀಡಾಗಿ ಕಂಗೆಟ್ಟ ನಾಡಿಗೆ ಮಳೆ ತಂದೆಯೆಂದು ಉಪಾಖ್ಯಾನ. ಜಗದ್ಸೃಷ್ಟಿಯಲ್ಲಿ ಹೆಣ್ಣೆಂಬ ವಿಲಿಂಗಿಯುಂಟೆಂದೇ ನೀನು ಕಂಡಿದ್ದಿಲ್ಲವೆಂದು ಇನ್ನೂ ಒಂದು ಕತೆ. ದಶರಥನ ಪುತ್ರಕಾಮೇಷ್ಠಿಯ ಅಧ್ವರ್ಯು ನೀನಾಗಿದ್ದೆಯೆಂದು ಇನ್ನೆಲ್ಲೋ ಉಲ್ಲೇಖ. ಶೃಂಗೇರಿ-ಕಿಗ್ಗಗಳ ಸ್ಥಳಪುರಾಣದಲ್ಲಿ ನಿನ್ನ ಪ್ರಸ್ತಾಪ… ಹೀಗೆ, ಹತ್ತಾರು ಕಾಲದೇಶಗಳ ಪುರಾಣದಲ್ಲಿ ಅಷ್ಟಿಷ್ಟು ಓದರಿತಿದ್ದ ನಿನ್ನನ್ನು ಹೀಗಿನ್ನೊಂದಾಗಿ ಕಂಡೇನೆಂದುಕೊಂಡಿರಲಿಲ್ಲ. ನಿಜಕ್ಕೂ ಬೆರಗಾಯಿತು.

ಮರುಳ ನೀನು. ಹುಚ್ಚಾಪಟ್ಟೆ. ಎಣಿಕೆಗೆ ಸಿಗದವನು. ನಿಲುಕಿಗೆಟುಕದವನು. ಇಕೋ ಇಕೋ- ಇನ್ನೇನು ಹಿಡಿದೇಬಿಟ್ಟೇನೆಂದುಕೊಂಡರೆ ಮೀನಿನಂತೆ… ಅಲ್ಲಲ್ಲ ಸೊಳ್ಳೆಯಂತೆ ನುಣುಚಿಕೊಂಡವನು. ಏನೆಂದು ತಿಳಿಯದ, ತಿಳಿಸಿಯೂ ತಿಳಿಯಗೊಡದ- ತಿಳಿಯಾಗದ ಕೊಳದಂತಿರುವ, ಈ ನಿನ್ನ ಕತೆಯೇನು ಮಾರಾಯ?

ಮರುಳಿಗೂ ಮೆಥಡುಂಟೆಂದು ಅಂದಕೊಂಡವನು ನಾನು. ಹಾಗಂದುಕೊಂಡ ಮೂಢನೇ ನಾನಿರಬಹುದು. ನಿನ್ನ ಈ ಹೊಸಕತೆಯನ್ನು ಓದಿದಾಗ ನಿನಗೊಂದು ನಿಗದಿಯ ಮೆಥಡೇ ಇಲ್ಲವೆಂದು ಅನಿಸಿಬಿಟ್ಟಿತಲ್ಲ, ಗುರೂ, ಇದಕ್ಕೇನನ್ನಲಿ? ಕಂಗೆಟ್ಟೆ. ಕೆಲವೊಮ್ಮೆ ಕಂಗಾಲಾದೆ. ಇಷ್ಟಿದ್ದೂ, ನಾನೆಣಿಸಿದ ನಿಗದಿ ನಿಖರತೆಯೆಲ್ಲ ನಿನ್ನಂಥವರಿಗಲ್ಲವೆಂಬುದು, ಕಡೆಗೆ, ನನಗೆ ನಾನೇ ಅಂದುಕೊಂಡ ಮೆಥಡು. ಆದರೂ, ರಿಷಿ… ನಿನಗೊಂದು ಬಂಧ ಬೇಕಿತ್ತು. ಘಟನೆಯಿಂದ ಘಟನೆಗೆ, ಪಾತ್ರದಿಂದ ಪಾತ್ರಕ್ಕೆ, ಕಥನದಿಂದ ಕಥನಕ್ಕೆ ಲಂಘಿಸುವ ನಿನಗೊಂದು ಒಟ್ಟಾದ ಬಂಧ ಬೇಕಿತ್ತು. ಒನ್ನಮೂನೆ ಒಗ್ಗಟ್ಟು. ಅದೇ ಮಿಸ್ಸಾಯಿತೆಂದರೆ ನಿನ್ನ ನಿಜದ ಕತೆಯೇನೆಂಬುದು ನನ್ನನ್ನು ಕಾಡುವ ಶಾಶ್ವತಸತ್ಯವೇನೋ.. ಅಥವಾ, ಶಾಶ್ವತ`ಸದ್ಯ’ವೇ?

ಇರಲಿ. ಈ ಬೆಂಗಳೂರು ನಿನ್ನನ್ನು ಕಾಡಿರುವಷ್ಟೇ- ಬಹುಶಃ ಇನ್ನೂ ಹೆಚ್ಚು, ನನ್ನನ್ನು ಕೆಣಕಿರುವುದು ಹೌದು. ಆದರೆ, ಇನ್ನೂ ಮದುವೆಗಣಿಯಾಗದ ಅವಸ್ಥೆಯಲ್ಲಿರುವ ನೀನು, ನಿನ್ನಂಥವರು ಕಾಣುವ ಈ ಶಹರ, ಶಾಹರಿಕತೆ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಉದ್ಯೋಗದೊಡನೆ ದುಡ್ಡು ಕೊಡುವ ಈ ಊರು ಜೀವನಕ್ಕೊಂದು ಕ್ರಮವನ್ನೂ ಕೊಡುತ್ತದೆನ್ನುವ ನಿನ್ನ ಮಾತಿಗೆ ಸಲಾಮು. ಇಷ್ಟಿದ್ದೂ, `ಇದು ಅರ್ಥವಾಗದ ಯಕ್ಷಿಣಿ’ ಅಂತನ್ನುವುದು ನಿನ್ನದೇ ಇನ್ನೊಂದು ಮಾತು. ಇಲ್ಲಿನ ಬದುಕನ್ನು ಜೇನುಗೂಡು, ರೇಶ್ಮೆಗೂಡುಗಳಂತೆ ಗ್ರಹಿಸಿರುವುದು ಇಷ್ಟವಾದ ಇನ್ನೊಂದು ಸಂಗತಿ. ಏನೇ ಇರಲಿ, ನಿನ್ನ ಗ್ರಹಿಕೆ ನಿನ್ನ ಕಾಣ್ಕೆ. ಆದರೆ, ನಿನ್ನ ನೋಟವನ್ನು ಸಾರ್ವತ್ರಿಕ-ಸಾರ್ವಕಾಲಿಕ ಸಂಗತಿಯೆಂಬಂತೆ ಬನ್ನಣೆಗಿಡುತ್ತೀಯಲ್ಲ, ಅದು ಇಷ್ಟವಗದಿದ್ದರೂ, ನಿನ್ನ ಎದೆಗಾರಿಕೆಗೆ ಜೈಯಿ. ವಯಸ್ಸಿಗೆ ತಕ್ಕ ಲಂಪಟತನಕ್ಕೆ ಚೌಕಟ್ಟು ಹಾಕುವ ನಿನ್ನ ಹುಂಬತನಕ್ಕೆ ತುಸು ಇರುಸುಮುರುಸಾಯಿತಾದರೂ ಇದು ನಿನ್ನ ಮೆಥಡೆಂದು ಸುಮ್ಮನಾಗಿದ್ದೇನೆ.

ಇನ್ನು, ನಿನ್ನ ಋಷ್ಯಶೃಂಗ-ತೆಯ ಬಗ್ಗೆ ಕಡೆಯಲ್ಲಿ ಹೇಳಿದ್ದು ಮನಸ್ಸು ನಾಟಿತು. ಬಹುಶಃ, ಇದು ನಮ್ಮೆಲ್ಲರ ಋಷ್ಯಶೃಂಗ-ತೆಯೂ ಹೌದು. `ವಿ ಸ್ಟಾರ್ಟ್ ಕನ್ಸ್ಯೂಮಿಂಗ್ ವಾಟೆವರ್ ಕಮ್ಸ್ ಇನ್ ಅವರ್ ವೇ…’ ಅನ್ನುವ ಮಾತಿನ ಹಿಂದೆಯೇ, ಪರಾವರ್ತಿತ ರಿಫ್ಲೆಕ್ಸಿನಂತೆ ಅನಿಸಿದ್ದು- `ವಾಟ್ ಇಫ್ ಇಟ್ ಕನ್ಸ್ಯೂಮ್ಸ್ ದಿ ಸೆಲ್ಫ್?’ ಅನ್ನೋದು. ಹೋಪ್ ದಟ್ ವೋಂಟ್ ಹ್ಯಾಪನ್. ಅಂಡ್, ಯೂ ವೋಂಟ್ ಲೆಟ್ ದಟ್ ಹ್ಯಾಪನ್.

ಒಂದಷ್ಟು ಚಿಯರುಗಳು.

– ನಾಗರಾಜ ವಸ್ತಾರೆ

Check on Google Playstore

Category:

Reviews

There are no reviews yet.

Be the first to review “Rushyasringa”

Your email address will not be published. Required fields are marked *

Scroll to top