ABOUT THE AUTHOR
ಡಾಕ್ಟರ್ ಪೆರಿ ಬೇರ್ಡ್‌ರವರ ಹಿರಿಯ ಮಗಳಾದ ಮಿಮಿ ಬೇರ್ಡ್‌ರವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಅಮೆರಿಕದ ಬಾಸ್ಟನ್ ನಗರದಲ್ಲಿ. ಉನ್ಮಾದಗ್ರಸ್ತ ಖಿನ್ನತೆಯಿಂದ ಬಳಲುತ್ತಿದ್ದ ತಮ್ಮ ತಂದೆಯೊಂದಿಗೆ ಮಿಮಿ ಒಡನಾಡಿದ್ದು ಕೇವಲ ಆರೇ ವರ್ಷ. ಮಿಮಿಗೆ ಆರು ವರ್ಷವಾಗುವ ಹೊತ್ತಿಗೆ ಅವಳ ತಂದೆ ಕುಟುಂಬದಿಂದ ದೂರವಾದರು. ತಂದೆ ಯಾಕೆ ಹಾಗೆ ಮಾಡಿದರು, ಅಂಥಾದ್ದೇನಾಗಿತ್ತು ಅವರ ಬದುಕಿನಲ್ಲಿ ಎಂಬುದರ ಬಗೆಗೆ ಮಿಮಿಗೆ ಅರಿವಾಗುವ ಹೊತ್ತಿಗೆ ಐವತ್ತು ವರ್ಷಗಳು ಕಳೆದಿದ್ದವು. ಆ ಕುರಿತು ಮಾತನಾಡಲಿಚ್ಛಿಸದ ಅಮ್ಮ ಮತ್ತು ತಮ್ಮ ವೈಯಕ್ತಿಕ ಬದುಕಿನ ಧಾವಂತಗಳ ನಡುವೆ ಅಪ್ಪನೆಂಬ ಒಗಟನ್ನು ಮಿಮಿ ಕೊಂಚ ಮೂಲೆಗೆ ಸರಿಸಿದ್ದರಾದರೂ ಸಂಪೂರ್ಣವಾಗಿ ಅವನ ನೆನಪಿನಿಂದ ಹೊರಬರಲಾಗಿರಲಿಲ್ಲ. ೧೯೯೪ರ ಹೊತ್ತಿಗೆ ಮಿಮಿ ಐವತ್ತಾರರ ಹೊಸ್ತಿಲಲ್ಲಿದ್ದರು. ಆ ವರ್ಷವೇ ಅವರಿಗೆ ಅವರ ತಂದೆ ತನ್ನ ಕಾಯಿಲೆಯ ಅವಧಿಯಲ್ಲಿ ಅವರಿಗಾದ ಅನುಭವಗಳನ್ನು ಬರೆದಿಟ್ಟಿದ್ದ ಹಸ್ತಪ್ರತಿ ಓದಲು ಸಿಕ್ಕಿತ್ತು. ಅಲ್ಲಿಯವರೆಗೂ ಅವರಿಗೆ ಅರ್ಥವಾಗದೇ ಉಳಿದಿದ್ದ ಅನೇಕ ಪ್ರಶ್ನೆಗಳಿಗೆ ಆಗ ಉತ್ತರ ಸಿಕ್ಕಿತ್ತು ಮತ್ತು ಅಪ್ಪನೆಂಬ ಒಗಟನ್ನು ಬಿಡಿಸಲು ಸಾಧ್ಯವಾಯಿತು. ಅಲ್ಲಿಂದ ಆರಂಭವಾಗಿತ್ತು ಈ ಪುಸ್ತಕದ ಪಯಣ.
ಮಿಮಿ ಬೇರ್ಡ್‌ರವರು ನ್ಯೂ ಹ್ಯಾಂಪ್‌ಶೈರ್‌ನ ಕೋಲ್ಬಿ ಸಾಯರ್ ಕಾಲೇಜಿನ ಪದವೀಧರರು. ಪದವಿ ಆದ ಮೇಲೆ ಅವರು ಹಾರ್ವರ್ಡಿನ ಶೈಕ್ಷಣಿಕ ಸಂಸ್ಥೆಯೊಂದರ ಆಡಳಿತ ಕಛೇರಿಯಲ್ಲಿ ಸೇವೆ ಸಲ್ಲಿಸಿದರು. ನಂತರ ವುಡ್‌ಸ್ಟಾಕ್‌ನ ವೈದ್ಯಕೀಯ ಸಂಸ್ಥೆಯೊಂದರ ನಿರ್ವಹಣಾಧಿಕಾರಿಯಾಗಿ ಸೇರಿಕೊಂಡರು. ಮಿಮಿಯವರು ವರ್ಮಾಂಟಿನ ಕ್ಯಾಲ್ವಿನ್ ಕೂಲಿಡ್ಜ್ ಸ್ಮಾರಕ ಸಂಸ್ಥೆಯ ಟ್ರಸ್ಟಿಯಾಗಿದ್ದಾರೆ ಕೂಡ. ಮಿಮಿಗೆ ಇಬ್ಬರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು. ಇದು ಅವರ ಮೊದಲ ಕೃತಿ.
ಮಿಮಿ ಬೇರ್ಡ್‌ರವರು ತನ್ನ ತಂದೆಯ ಹಸ್ತಪ್ರತಿಯನ್ನೊಳಗೊಂಡ ಪುಸ್ತಕವೊಂದನ್ನು ಹೊರತರುವ ಯೋಚನೆ ಮಾಡಿದಾಗ ಅವರಿಗೆ ಬರವಣಿಗೆಯಲ್ಲಿ ಜೊತೆಯಾಗಿ ಪುಸ್ತಕಕ್ಕೊಂದು ರೂಪು ಕೊಟ್ಟವರು ಈವ್ ಕ್ಲಾಕ್ಸ್ಟನ್. ಈವ್ ಹುಟ್ಟಿದ್ದು ಲಂಡನ್ನಿನಲ್ಲಿ, ಇರುವುದು ನ್ಯೂಯಾರ್ಕ್‌ನಲ್ಲಿ. ಇವರು ವೋಗ್, ಟ್ಯಾಟ್ಲರ್ ಮತ್ತು ಗಾರ್ಡಿಯನ್ ಪತ್ರಿಕೆಗಳಲ್ಲಿ ಫ್ರೀಲಾನ್ಸ್ ಬರಹಗಾರರಾಗಿದ್ದರು. ಅವರು Non-fiction ಪುಸ್ತಕಗಳ ಸಹಲೇಖನಕ್ಕೆ ಇಳಿದದ್ದು ನಂತರದಲ್ಲಿ. ಅವರು ರೇಡಿಯೋ ನಿರ್ಮಾಪಕಿ ಕೂಡ ಆಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಿಳಗಿಯವರಾದ ಪ್ರಜ್ಞಾ ಈಗ ಕೇನ್ಯಾ ದೇಶದ ನೈರೋಬಿಯಲ್ಲಿ ವಾಸಿಸುತ್ತಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಎಂ.ಎ ಮುಗಿಸಿ ರಾಜ್ಯದ ಬೇರೆ ಬೇರೆ ಕಾಲೇಜುಗಳಲ್ಲಿ ಕೆಲಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಓದು, ಬರಹ ಮತ್ತು ಛಾಯಾಗ್ರಹಣ ಇವರ ಹವ್ಯಾಸ. ಇಂಗ್ಲೀಷಿನ ಕೆಲವು ಅಕೆಡೆಮಿಕ್ ಲೇಖನಗಳ ಕನ್ನಡ ಅನುವಾದದ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಚಂದಿರ ಬೇಕೆಂದವನು ಇವರು ಅನುವಾದಿಸಿದ ಮೊದಲ ಪುಸ್ತಕ.
lsprajna@gmail.com
Reviews
There are no reviews yet.